ಜಪಾನ್ ಸಮುದ್ರ -
ಪೆಸಿಫಿಕ್ ಸಾಗರದ ಒಂದು ಭಾಗ. ಪಶ್ಚಿಮದಲ್ಲಿ ಕೊರಿಯ ಮತ್ತು ಸೋವಿಯೆತ್ ಒಕ್ಕೂಟ, ಪೂರ್ವದಲ್ಲಿ ಜಪಾನಿನ ತೀರಗಳು ಇದರ ಎಲ್ಲೆಗಳಾಗಿವೆ. ಒಟ್ಟು ವಿಸ್ತೀರ್ಣ 3,89,100 ಚ.ಮೈ. ಈ ಸಮುದ್ರದ ಗರಿಷ್ಠ ಆಳ 12,276. ದಕ್ಷಿಣದ ಕೊರಿಯ ಜಲಸಂಧಿಯಿಂದಾಗಿ ಪೂರ್ವ ಚೀನ ಸಮುದ್ರಕ್ಕೂ ಉತ್ತರದ ಸೋಯ ಜಲಸಂಧಿಯಿಂದಾಗಿ ಓಕಾಟ್‍ಸ್ಕ್ ಸಮುದ್ರಕ್ಕೂ ಪೂರ್ವದ ಸುಗಾರೂ ಜಲಸಂಧಿಯಿಂದಾಗಿ ಪೆಸಿಫಿಕ್ ಸಾಗರಕ್ಕೂ ಈ ಸಮುದ್ರಕ್ಕೂ ಸಂಪರ್ಕ ಏರ್ಪಟ್ಟಿದೆ. ಸೋವಿಯೆತ್ ಒಕ್ಕೂಟಕ್ಕೆ ಸೇರಿದ ವ್ಲಾಡಿವಸ್ಟಾಕ್ ನಗರ ಈ ಸಮುದ್ರದ ತೀರದಲ್ಲಿರುವ ಪ್ರಮುಖ ಬಂದರು.

ಜಗತ್ತಿನ ಪ್ರಮುಖ ಮೀನುಗಾರಿಕೆ ಕ್ಷೇತ್ರಗಳಲ್ಲಿ ಈ ಸಮುದ್ರವೂ ಒಂದು. ಹೆರಿಂಗ್, ಸಾಲ್‍ಮನ್, ಕ್ರ್ಯಾನನ್, ಕಾಡ್ ಮುಂತಾದ ಮೀನುಗಳು ಇಲ್ಲಿ ಹೇರಳವಾಗಿ ಸಿಗುತ್ತವೆ. ತಿಮಿಂಗಿಲಗಳ ಬೇಟೆಯೂ ಇಲ್ಲಿ ಸಾಕಷ್ಟು ಆಗುತ್ತದೆ. ಇದರಿಂದಾಗಿ ಸೋವಿಯೆತ್ ಒಕ್ಕೂಟ, ಕೊರಿಯ ಮತ್ತು ಜಪಾನಿನ ಸಮುದ್ರತೀರದ ಅನೇಕ ನಗರಗಳಲ್ಲಿ ಮೀನುಗಾರಿಕೆ ಒಂದು ಪ್ರಮುಖ ಉದ್ಯಮವಾಗಿದೆ. 										(ಎಸ್.ಎನ್‍ಎಆರ್‍ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ